ರಚನೆ: ಸರ್ವಜ್ಞ

ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ ಸರ್ವಜ್ಞ ||

ಮಟ್ಟಿ ಶ್ರೀಗಂಧವನು ಇಟ್ಟು ತಾ ನೊಸಲೊಳಗೆ
ನೆಟ್ಟನೆ ಸ್ವರ್ಗಪಡೆವಡೆ ಸಾಣಿಕಲ್
ಕೆಟ್ಟ ಕೇಡೇನು ಸರ್ವಜ್ಞ ||

ನಿತ್ಯ ನೀರ್ಮುಳುಗುವನು ಹತ್ತಿದಡೆ ಸ್ವರ್ಗವನು
ಎತ್ತಿ ಜನ್ಮವನು ಜಲದಿಪ್ಪ ಕಪ್ಪೆಯು
ಹತ್ತದೇಕೆಂದ ಸರ್ವಜ್ಞ ||

ಸುಟ್ಟ ಬೂದಿಯ ತಂದು ದಟ್ಟವಾಗಿಯೆ ಬಡಿದು
ಶ್ರೇಷ್ಠ ಸ್ವರ್ಗವನು ಅಡರುವಡೆ ಕತ್ತೆ ತಾ
ಕೆಟ್ಟ ಕೇಡೇನು ಸರ್ವಜ್ಞ ||

ಕತ್ತೆ ಬೂದಿಲಿ ಹೊರಳಿ ಮತ್ತೆ ಯತಿಯಪ್ಪುದೇ
ತತ್ವವರಿಯದಲೆ ಭಸಿತವಿಟ್ಟವ ಶುದ್ಧ
ಕತ್ತೆಯಂತೆಂದ ಸರ್ವಜ್ಞ ||

ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು
ಹಿಂಡಿನಗಲಿದ ಗಜದಂತೆ ಇಪ್ಪವರ
ಕಂಡು ನಂಬುವುದು ಸರ್ವಜ್ಞ ||

ವರ್ಗ: ಸರ್ವಜ್ಞನ ವಚನಗಳು
ವರ್ಗ: ವಚನ ಸಾಹಿತ್ಯ